ಕೆಂಡಾಲ್, ಹೆನ್ರಿ ಕ್ಲಾರೆನ್ಸ್
1839-1882. ಆಸ್ಟ್ರೇಲಿಯದ ಕವಿ. ನ್ಯೂಸೌತ್‍ವೇಲ್ಸ್‍ನ ಉಲ್ಲಾದುಲ್ಲದ ಬಳಿ ಜನಿಸಿದ. ಬಾಲಕನಾಗಿದ್ದಾಗಲೆ ತನ್ನ ಬಂಧುವಿನ ಜೊತೆಯಲ್ಲಿ ಎರಡು ವರ್ಷ ದಕ್ಷಿಣ ಸಮುದ್ರ ದ್ವೀಪಗಳಲ್ಲಿ ಜಲಯಾನ ಮಾಡಿದ. ಆರಂಭದಲ್ಲಿ ಸಿಡ್ನಿಯಲ್ಲಿ ಸಲಹೆ ವಕೀಲನ ಕಚೇರಿಯಲ್ಲಿ ಕೆಲಸ ಮಾಡಿದ. ಅನಂತರ ಮೋಜಣಿ ಇಲಾಖೆಗೆ ಸೇರಿದ. ಈತನ ಪೊಯಮ್ಸ್ ಅಂಡ್ ಸಾಂಗ್ಸ್ ಕವನಸಂಕಲನ 1862ರಲ್ಲಿ ಪ್ರಕಟವಾಯಿತು. ಡೆತ್ ಇನ್ ದಿ ಬುಷ್ ಮತ್ತು ದಿ ಗ್ಲೆನ್ ಆಫ್ ಅರ್ರಾವಟ್ಟ ಕವನಗಳಿಗೆ ಬಹುಮಾನ ದೊರೆತ ಮೇಲೆ ಮೆಲ್ಬೊರ್ನ್‍ಗೆ ತೆರಳಿದ. ಅಲ್ಲಿ ಲೀವ್ಸ್ ಫ್ರಂ ಆಸ್ಟ್ರೇಲಿಯನ್ ಫಾರೆಸ್ಟ್ಸ್ ಎಂಬ ಗ್ರಂಥವನ್ನು ಪ್ರಕಟಿಸಿದ (1869). ಅತಿಯಾದ ಬಡತನದಿಂದ ಜೀವನದಲ್ಲಿ ಯಾವೊಂದು ಪ್ರಗತಿಯನ್ನು ಕಾಣದೆ ನೊಂದ ಈತ ಮತ್ತೆ ಸಿಡ್ನಿಗೆ ಹಿಂತಿರುಗಿ ಮರದ ವ್ಯಾಪಾರಿಯ ಬಳಿ ಗುಮಾಸ್ತನಾಗಿ ನಿಂತ. 1880ರಲ್ಲಿ ಈತನ ಸಾಂಗ್ಸ್ ಫ್ರಂ ದಿ ಮೌನ್ಟನ್ಸ್ ಪ್ರಕಟವಾಯಿತು. 1881ರಲ್ಲಿ ರಾಜ್ಯದ ಅರಣ್ಯ ಇಲಾಖೆಯಲ್ಲಿ ಇನ್ಸ್‍ಪೆಕ್ಟರ್ ಹುದ್ದೆ ದೊರಕಿತು. ತಡವಾಗಿ ದೊರೆತ ಈ ಹುದ್ದೆಯ ಉತ್ಕರ್ಷ ಬಹು ಕಾಲ ನಿಲ್ಲಲಿಲ್ಲ. ದೇಹ ಸ್ವಾಸ್ಥ್ಯವಿಲ್ಲದಿದ್ದ ಕೆಂಡಾಲ್ ಮರು ವರ್ಷವೇ ನಿಧನವಾದ. 

	ಕೆಂಡಾಲ್‍ನನ್ನು ಆಸ್ಟ್ರೇಲಿಯಾದ ದೇಶೀಯ ಕಾವ್ಯದ ಜನಕನೆಂದು ಪರಿಗಣಿಸಲಾಗಿದೆ. ಈತ ಶಕ್ತಿವಂತ ಕವಿ, ಪ್ರತಿಭಾಶಾಲಿ. ತನ್ನ ಪದ್ಯಗಳಲ್ಲಿ ಆಸ್ಟ್ರೇಲಿಯಾದ ಪ್ರಕೃತಿ ಸೌಂದರ್ಯ ಸಂಪತ್ತನ್ನು ಯಥಾವತ್ತಾಗಿ ಚಿತ್ರಿಸಿದ್ದಾನೆ. ಈತನ ಮರಣಾನಂತರ ಈತನ ಎಲ್ಲ ಪದ್ಯಗಳೂ ಸೇರಿದ ಬೃಹತ್ ಸಂಪುಟವೊಂದು ಪ್ರಕಟವಾಯಿತು (1903). 				
	 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ